ಆರ್ಥೊಡಾಕ್ಸ್ ಈಸ್ಟರ್ನ್ ಚರ್ಚ್
	
ಗ್ರೀಸ್, ರುಮೇನಿಯ, ಬಲ್ಗೇರಿಯ, ಯುಗೊಸ್ಲಾವಿಯ, ಸೈಪ್ರಸ್, ರಷ್ಯಗಳಲ್ಲಿರುವ 13 ಚರ್ಚುಗಳಿಗೆ ಈ ಹೆಸರಿದೆ. ಇವು ಸ್ವಯಮಾಡಳಿತ ಸ್ವಾತಂತ್ರ್ಯ ಉಳ್ಳವು. ಇವನ್ನು ಗ್ರೀಕ್ ಆರ್ಥೊಡಾಕ್ಸ್ ಚರ್ಚುಗಳೆಂದೂ ಕರೆಯುತ್ತಾರೆ. ಪ್ರಪಂಚದ ಕ್ರೈಸ್ತ ಜನರಲ್ಲಿ 1/6 ಭಾಗ ಈ ಚರ್ಚುಗಳಿಗೆ ಸೇರಿದವರಾಗಿದ್ದಾರೆ. ಆದಿಕಾಲದ ಮತ್ತು ಈಗಿನ ರೋಮನ್ ಕ್ಯಾಥೊಲಿಕ್ ಮತೀಯರ ಸಾಮಾನ್ಯ ಮಂಡಲಿಗಳ ವಿಷಯದಲ್ಲಿ ಸಮಸ್ತ ಕ್ರೈಸ್ತ ಪ್ರಪಂಚಕ್ಕೆ ಸೇರಿದ ಮೊದಲ ಏಳು ವಿಧಿಗಳನ್ನು ಈ ಚರ್ಚು ಪಂಗಡಗಳು ಅಂಗೀಕರಿಸುತ್ತವೆ. ಆದರೆ ರೋಮಿನ ಗುರುವಾದ ಪೋಪ್ ಜಗದ್ಗುರುವಿನ ಅಧಿಪತ್ಯವನ್ನು ಮಾತ್ರ ತಿರಸ್ಕರಿಸುತ್ತವೆ. ನೆಸ್ಟೋರಿಯನ್, ಕಾಪಟಿಕ್, ಜ್ಯಾಕೊಬೈಟ್ ಮತ್ತು ಆರ್ಮೀನಿಯನ್ ಚರ್ಚ್ ಭಕ್ತರು ಇವರ ದೃಷ್ಟಿಯಲ್ಲಿ ನಾಸ್ತಿಕರು. 
	
ಚರ್ಚು ಚರ್ಚುಗಳ ಮಧ್ಯೆ ಪೂರ್ವಕಾಲದಿಂದಲೂ ಭಿನ್ನಾಭಿಪ್ರಾಯಗಳಿದ್ದುವು. ಆದರೆ ಪೂರ್ವಪಶ್ಚಿಮ ಚರ್ಚುಗಳಲ್ಲಿನ ಒಡಕು ಬಹಿರಂಗವಾದದ್ದು ಕ್ರಿಸ್ತಶಕ 5ನೆಯ ಶತಮಾನದಲ್ಲಿ; ಆ ಒಡಕು ಪೂರ್ತಿ ಆದದ್ದು 9ನೆಯ ಶತಮಾನದಲ್ಲಿ. ಪೋಪರ ಅಧಿಕಾರವನ್ನು ಪೋಟಿಯನ್ ಪ್ರತಿಭಟಿಸಿದಾಗ, ಅಂತೆಯೇ ಪ್ರತಿಯಾಗಿ ಕಾನ್‍ಸ್ಪಾಂಟಿನೋಪಲ್‍ನ ಹಿರಿಯ ಮಠಾಧಿಪತಿಯನ್ನು ಪೋಪ್ 1054ರಲ್ಲಿ ಭತ್ರ್ಸನೆ ಮಾಡಿದಾಗ, ಅನಂತರ ನಡೆದ ಕ್ರೈಸ್ತ ಧರ್ಮಯುದ್ಧಗಳು (ಕ್ರೂಸೇಡ್ಸ್) ಪರಸ್ಪರ ವಿರಸವನ್ನು ಇನ್ನೂ ಹೆಚ್ಚು ಮಾಡಿದವು. ಈ ಒಡಕನ್ನು ಮಾಡಿದ ಅನೇಕ ಯತ್ನಗಳು ವಿಫಲವಾದವು.
	
ಪೂರ್ವಪಶ್ಚಿಮ ಚರ್ಚುಗಳಲ್ಲಿ ಸಂಪ್ರದಾಯ ಭೇದಗಳಿವೆ. ಶತಮಾನಗಳ ಕಾಲ ಪ್ರಭಾವ ಹೊಂದಿದ್ದನ್ನು ರಷ್ಯದ ಗ್ರೀಕ್ ಚರ್ಚು, ರಾಜ್ಯಕ್ಕೂ ಚರ್ಚಿಗೂ ಮೊದಲು ಹಿತಸಂಬಂಧವಿತ್ತು. ಈ ಚರ್ಚಿನ ಚರಿತ್ರೆಯಲ್ಲಿನ ಮಹಾಘಟನೆಯೆಂದರೆ ನಿಕೊನ್ ನಾಯಕತ್ವದಲ್ಲಿ ಜರುಗಿದ ಸುಧಾರಣಾ ಚಳುವಳಿ. ರಷ್ಯದ ಕ್ರಾಂತಿಯಲ್ಲಿ ಈ ಚರ್ಚು ಪೂರ್ತಿ ಅಳಿಯಿತು. ಎರಡನೆಯ ಮಹಾಯುದ್ಧ ಮುಗಿದು ಸಮತಾವಾದ ತನ್ನ ಪ್ರಭಾವ ಬೀರಿದ ಮೇಲೆ ಬಲ್ಗೇರಿಯ, ಯುಗೊಸ್ಲಾವಿಯ, ರುಮೇನಿಯ, ಫಿನ್‍ಲೆಂಡ್, ಪೋಲೆಂಡ್‍ಗಳಲ್ಲೂ ಚರ್ಚುಗಳು ದುರ್ಬಲವಾದವು. ಈಗ ಪುನಃ ಪಶ್ಚಿಮ ಚರ್ಚಿನೊಡನೆ ವಿಲೀನಗೊಳ್ಳಲು ಪ್ರಯತ್ನ ನಡೆಯುತ್ತಿದೆ.									        
 
(ಬಿ.ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ